ಟ್ಯಾನಿನ್
 	ಸಸ್ಯಜನ್ಯ ಅಸ್ಫಟಿಕ ಪದಾರ್ಥಗಳು. ಓಕ್ ಮರದ ತೊಗಟೆಯನ್ನು ಟ್ಯಾನ್ ಎಂದು ಕರೆಯುವುದು ರೂಢಿ. ಟ್ಯಾನಿನ್ ಅದರಿಂದ ಲಭಿಸಿದ ಪದಾರ್ಥವಾದ್ದರಿಂದ ಈ ಹೆಸರು ಬಂದಿದೆ. ಸಾಮಾನ್ಯ ಟ್ಯಾನಿನ್ನಿನ ಆಕರ ಓಕ್ ಗಾಲ್‍ನಟ್ಟುಗಳು. ತುರ್ಕಿ ಗಾಲ್‍ನಟ್ಟುಗಳು ಮತ್ತು ಚೀನಗಾಲ್‍ನಟ್ಟುಗಳಲ್ಲಿ ಅನುಕ್ರಮವಾಗಿ 50-60% ಮತ್ತು 70% ಟ್ಯಾನಿನ್ನುಗಳು ಇವೆ. ಟೀಯಲ್ಲೂ ಟ್ಯಾನಿನ್ ಉಂಟು. ಮ್ಯಾಂಗ್ರೋವ್ ತೊಗಟೆಯಿಂದ ಪಡೆದ ಟ್ಯಾನಿನ್ನಿಗೆ ಕಚ್ ಎಂದು ಹೆಸರು. ಇದನ್ನು ವಿಶೇಷವಾಗಿ ಮಲಯದಲ್ಲಿ ಉತ್ಪಾದಿಸುವರು. ಟ್ಯಾನಿನ್ನಿನ ಉತ್ಪಾದನೆಯಲ್ಲಿ ಮೇಲೆ ಹೇಳಿದ ತೊಗಟೆ ಅಥವಾ ಗಾಲ್‍ನಟ್ಟುಗಳನ್ನು ಜಜ್ಜಿ ಸಣ್ಣಸಣ್ಣ ಚೂರುಗಳಾಗಿ ಮಾಡಿಕೊಳ್ಳುವುದು ಮೊದಲ ಹಂತ. ಇವನ್ನು ತೊಳೆದು ನೀರಿನೊಂದಿಗೆ ಕುದಿಸಿದರೆ ಟ್ಯಾನಿನ್ ಬೇರ್ಪಡುತ್ತದೆ. ಅದ್ರಾವ್ಯ ವಸ್ತುಗಳನ್ನು ಸೋಸಿ ತೆಗೆದ ಬಳಿಕ ಮಂದವಾದ ಕೆಂಗಂದು ಬಣ್ಣದ ದ್ರವ ಉಳಿಯುವುದು. ಈ ಸ್ನಿಗ್ಧ ದ್ರವವನ್ನು ಕುದಿಸಿದರೆ ಅಶುದ್ಧ ಟ್ಯಾನಿನ್ ರೊಟ್ಟಿಗಟ್ಟುವುದು. ಇದನ್ನು ಆಲ್ಕೊಹಾಲ್ ಈಥರ್ ಮಿಶ್ರಣದಲ್ಲಿ ನೆನಹಾಕಿದರೆ ಟ್ಯಾನಿನ್ ವರ್ಣರಂಜಿತ ಅಸ್ಫಟಿಕ ರಾಶಿಯಾಗಿ ದೊರೆಯುತ್ತದೆ. ಇದನ್ನು ಟ್ಯಾನಿಕ್ ಆಮ್ಲ ಎಂದೂ ಕರೆಯುತ್ತಾರೆ. ಗ್ಯಾಲಿಕ್ ಆಮ್ಲವನ್ನು ರಂಜಕದ ಆಕ್ಸಿಕ್ಲೋರೈಡಿನೊಡನೆ ಕಾಯಿಸಿಯೂ ಇದನ್ನು ತಯಾರಿಸಬಹುದು. ಟ್ಯಾನಿನ್ನುಗಳು ತೀಕ್ಷ್ಣ (ಅಸ್ಟ್ರಿಂಜೆಂಟ್) ರುಚಿಯುಳ್ಳವು. ನೀರು ಮತ್ತು ಆಲ್ಕೋಹಾಲುಗಳಲ್ಲಿ ಸರಾಗವಾಗಿ ವಿಲೀನವಾಗಿ ಕಲಿಲ ದ್ರಾವಣಕ್ಕೆ ಪ್ರೋಟೀನುಗಳು ಅಥವಾ ಆಲ್ಕಲಾಯ್ಡುಗಳನ್ನು ಹಾಕಿದರೆ ಒತ್ತರಿಬಿಡುವುವು. ಕಬ್ಬಿಣದ ಲವಣಗಳೊಡನೆ ನೀಲಿ ಅಥವಾ ಹಸಿರು ಬಣ್ಣವನ್ನು ಕೊಡುವುದು ಇವುಗಳ ವೈಶಿಷ್ಟ್ಯ.

	ಟ್ಯಾನಿನ್ನುಗಳಲ್ಲಿ ಮೂರು ವಿಧ. ಮೊದಲನೆಯದು ಸಾಂದ್ರೀಕೃತ ಟ್ಯಾನಿನ್ನುಗಳು. ಇವನ್ನು ಆಮ್ಲಗಳಿಂದಾಗಲಿ ಎನ್‍ಜೈóಮುಗಳಿಂದಾಗಲಿ ಜಲ ವಿಭಜಿಸಲು ಸಾಧ್ಯವಿಲ್ಲ. ಅಕಾಕ್ಯಾಟೆಜನ್, ಐಸೊ ಅಕಾಕ್ಯಾಟಿನ್ ಮತ್ತು ಗ್ಯಾಂಬಿರ್ ಕ್ಯಾಟಿಚಿನ್ ಟ್ಯಾನಿನ್ನುಗಳು ಈ ವರ್ಗಕ್ಕೆ ಸೇರಿದವು. ಇವುಗಳಲ್ಲೆಲ್ಲ ಬಹು ಆದೇಶಿತ ಫ್ಲೊರೊಗ್ಲೂಸಿನಾಲ್ ಹಂದರವವಿದೆ. ಎರಡನೆಯದು ಜಲವಿಭಾಜ್ಯ ಟ್ಯಾನಿನ್ನುಗಳು. ಗ್ಯಾಲೊ ಟ್ಯಾನಿನ್ನುಗಳು ಇಲ್ಯಾಜಿ ಟ್ಯಾನಿನ್ನುಗಳು ಮತ್ತು ಕೆಫೆಟ್ಯಾನಿನ್ನುಗಳು ಈ ಗುಂಪಿನವು. ಹೀಗೆ ವರ್ಗೀಕರಿಸಲಾಗದ ಉಳಿದ ಟ್ಯಾನಿನ್ನುಗಳದು ಮೂರನೆಯ ವರ್ಗ.

	ವಾಣಿಜ್ಯ ಮತ್ತು ವೈದ್ಯಕೀಯದಲ್ಲಿ ಬಳಸುವ ಪರಿಚಿತ ಟ್ಯಾನಿಕ್ ಆಮ್ಲವನ್ನು ಗ್ಯಾಲೊಟ್ಯಾನಿನ್ನುಗಳಿಂದ ತಯಾರಿಸುತ್ತಾರೆ. ಟ್ಯಾನಿಕ್ ಆಮ್ಲ ತಿಳಿಹಳದಿ ಬಣ್ಣದ ಪುಡಿ. ಅದಕ್ಕೆ ರಕ್ತಸ್ರಾವವನ್ನು ತಡೆಯುವ ಗುಣವಿದೆ. ಸುಟ್ಟಗಾಯಕ್ಕೆ ಟ್ಯಾನಿಕ್ ಆಮ್ಲದ ಜಲೀಯ ದ್ರಾವಣವನ್ನು ಸವರಿದರೆ ಚರ್ಮದಲ್ಲಿದ್ದು ಸುಟ್ಟುಹೋಗಿದ್ದ ಪ್ರೋಟೀನ್ ಒತ್ತರಿಸಿ ಒಂದು ರಕ್ಷಾಪದರದಂತೆ ವರ್ತಿಸುವುದು. ಇದರಿಂದ ಸುಟ್ಟ ಭಾಗ ಕೀತುಕೊಳ್ಳುವುದಿಲ್ಲ ಮತ್ತು ಈ ರಕ್ಷಾಪದರದ ಅಡಿಯಲ್ಲಿ ಹೊಸ ಚರ್ಮ ಬೆಳೆಯಲು ಅನುಕೂಲವಾಗುತ್ತದೆ. ಟ್ಯಾನಿಕ್ ಆಮ್ಲದ ಸಂಪರ್ಕದಲ್ಲಿ ತೊಗಲಿನಲ್ಲಿರುವ ಜೆಲೆಟಿನ್ ಎಂಬ ಪ್ರೋಟೀನ್ ಅದ್ರಾವ್ಯ ವಸ್ತುವಾಗಿ ಪರಿವರ್ತಿತವಾಗುವುದು. ಆಗ ಚರ್ಮ ನಾರುವುದಿಲ್ಲ. ಹೀಗೆ ತೊಗಲನ್ನು ಹದಗೊಳಿಸಿ ಚರ್ಮ ತಯಾರಿಸುವ ಉದ್ಯಮಕ್ಕೆ ಟ್ಯಾನಿಂಗ್ ಎನ್ನುವುದು ಸಹಜವಾಗಿದೆ. ಟ್ಯಾನಿನ್ನುಗಳು ಫೆರಿಕ್ ಲವಣಗಳೊಡನೆ ಹಸಿರು-ಕಪ್ಪು ಅಥವಾ ನೀಲಿ-ಕಪ್ಪು ಬಣ್ಣಗಳನ್ನು ಉಂಟುಮಾಡುವುದರಿಂದ ಶಾಯಿಯ ತಯಾರಿಕೆಯಲ್ಲಿ ಈ ತಂತ್ರವನ್ನು ಬಳಸುತ್ತಾರೆ. ಟ್ಯಾನಿನ್ನುಗಳನ್ನು ವರ್ಣಬಂಧಕಗಳಾಗಿಯೂ ಉಪಯೋಗಿಸುವುದುಂಟು. ಟ್ಯಾನಿಕ್ ಆಮ್ಲದ ಅಣೂಸೂತ್ರ ಅ76ಊ52ಔ46 .
(ಎಚ್.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ